0+
ವರ್ಷ ಸಾಧನೆಯ ಹಾದಿಯಲ್ಲಿ
ಸಂಕಲ್ಪ - ಸಾಧನೆ - ವಿಕಾಸ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್, ಕಲಬುರ್ಗಿ ಜಿಲ್ಲೆ ಕರ್ನಾಟಕ
ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎನ್ನುವ ಶ್ರೀ ಬಸವರಾಜ ಪಾಟೀಲ ಸೇಡಂ ರವರ ಫಲವೇ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ. ಇಂದು ಕೇವಲ ಶಿಕ್ಷಣ ಸಂಸ್ಥೆ ಅಷ್ಟೇ ಆಗಿರದೇ ತಾಯಿ ಭಾರತಿಗೆ ಜಗನ್ಮಾತೆಯನ್ನಾಗಿ ಮಾಡಲು ಇಡೀ ಸಮಾಜ ಆ ನಿಟ್ಟಿನಲ್ಲಿ ಎದ್ದು ನಿಲ್ಲಲು ಮಾರ್ಗದರ್ಶನ ಮಾಡುತ್ತಲಿದೆ. ಇದರ ಸಂಪರ್ಕ ದೇಶದ ಉದ್ದಗಲಕ್ಕೆ ಅನೇಕ ಸಜ್ಜನ ಶಕ್ತಿಗಳು, ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈ ಜೋಡಿಸಿವೆ. ಇದರೊಂದಿಗೆ ಅದರಣೀಯ ಶ್ರೀ ಕೆ.ಎನ್. ಗೋವಿಂದಾಚಾರ್ಯರ ಪ್ರಕೃತಿ ಕೇಂದ್ರಿತ ವಿಕಾಸ, ಸ್ವದೇಶಿ ಶೈಲಿಯ ಗೋ ಆಧಾರಿತ ಆರ್ಥಿಕತೆಯ ಗ್ರಾಮಾಭಿವೃದ್ಧಿಯ ಕನಸನ್ನು ನನಸು ಮಾಡುವತ್ತ, ಹೈದರಾಬಾದ ಕರ್ನಾಟಕವನ್ನು ಪ್ರಯೋಗ ಭೂಮಿಯನ್ನಾಗಿ ಮಾಡಿಕೊಂಡು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ವಿಕಾಸ ಅಕಾಡೆಮಿಯು ಕಾರ್ಯಪ್ರವೃತ್ತ ವಾಗಿದೆ. ಅಖಿಲ ಭಾರತೀಯ ಸ್ತರದಲ್ಲಿ ಭಾರತ ವಿಕಾಸ ಸಂಗಮದೊಂದಿಗೆ ಕೈ ಜೋಡಿಸಿ ಅಕ್ಷಯ ವಿಕಾಸದತ್ತ ಹೆಜ್ಜೆ ಇರಿಸಿದೆ. 2024-25 ರಲ್ಲಿ ಸಮಿತಿಯ ಸ್ವರ್ಣ ಜಯಂತಿ ಸಂದರ್ಭದಲ್ಲಿ ಇಂತಹ ವಿಕಾಸದ ವಿರಾಟ್ ರೂಪ ನಮಗೆ ನೋಡಲು ಸಿಗಲಿದೆ.
ಸ್ವರ್ಣ ಜಯಂತಿ ವರ್ಷ 2024-25
ಅಕ್ಷಯ ವಿಕಾಸದೆಡೆಗೆ
ಮಾನವ ಇತಿಹಾಸದಲ್ಲಿ ಅಸಾಧ್ಯ ಎಂಬ ವಿಷಯವೇ ಇಲ್ಲ. ಹಿಂದೆ ಸಾಧ್ಯವಿಲ್ಲ ಎಂದು ಹೇಳಲ್ಪಟ್ಟ ಹಲವಾರು ವಿಷಯಗಳು ಇಂದು ಸಾಧಿತವಾಗಿದೆಯಲ್ಲದೆ, ಅತ್ಯಂತ ಸ್ವಾಭಾವಿಕ ಎನಿಸುವಷ್ಟರ ಮಟ್ಟಿಗೆ ಜನಜನಿತವಾಗಿದೆ. ಮನುಷ್ಯ ಹಾರಲಾರ ಎಂಬುದು 1900 ಇಸವಿಯ ವರೆಗೂ ಪ್ರಚಲಿತವಾಗಿತ್ತು. ಆದರೆ 1903ರಲ್ಲಿ ಯಂತ್ರಗಳ ಸಹಾಯದಿಂದ ಮಾನವ ಹಾರಿಯೇ ಬಿಟ್ಟ. ಇಂದು ಇದೇ ಮಾನವ ಚಂದ್ರಲೋಕಕ್ಕೆ ಕಾಲಿಟ್ಟಿರುವನು. ಮಂಗಳನ ಅಂಗಳದಲ್ಲಿ ನಮ್ಮ ದೇಶದ ಮಾನವ ನಿರ್ಮಿತ ಉಪಗ್ರಹ ಕಾಲಿಟ್ಟಿದೆ.
ಇದು ವ್ಯಕ್ತಿ ಜೀವನಕ್ಕೆ ಮಾತ್ರ ಆಳವಡಿಸುವಂಥಹದ್ದು ಎಂದು ತಿಳಿಯುವ ಅವಶ್ಯಕತೆ ಇಲ್ಲ. ಸಮಾಜ, ಪ್ರದೇಶಕ್ಕೂ ಇದು ಅನ್ವಯಿಸುತ್ತದೆ. ಒಮ್ಮೆ ಉದ್ಘಾಯ ಸ್ಥಿತಿಯಲ್ಲಿದ್ದ ಭೂಪ್ರದೇಶ ಕಾಲಕ್ರಮೇಣ ಅಧೋಗತಿಗೆ ಇಳಿದ ಉದಾಹರಣೆಗಳು ಚರಿತ್ರೆಯಲ್ಲಿ ಸಾಕಷ್ಟು ಸಿಗುತ್ತವೆ. ಅದೇ ರೀತಿ ಒಮ್ಮೆ ತೀರಾ ಹಿಂದುಳಿದ ಪ್ರದೇಶ ಇಂದು ಮೇಲ್ಕಟ್ಟಿ ಮುಟ್ಟಿರುವುದು ಸತ್ಯ. ನಮ್ಮದೇ ಹಂಪಿ ಪರಿಸರ ಮೊದಲಿನ ವಾಕ್ಯಕ್ಕೆ ಉದಾಹರಣೆಯಾಗಿದೆ. ಕಾಲದ ಕಲಿತನಕ್ಕೆ ಬೆರಗಾಗದವರು ಇಲ್ಲವೇ ಇಲ್ಲ.
ಈ ಮಾತು ಹೈದ್ರಾಬಾದ ಕರ್ನಾಟಕ ಭೂಪ್ರದೇಶಕ್ಕೂ ಅನ್ವಯವಾಗುತ್ತದೆ. ಶರಣರ, ದಾಸರ ಆಡುಂಬೋಲ; ನೃಪತುಂಗನ ಸಾಮ್ರಾಜ್ಯ, ಅಣ್ಣ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜಯತೀರ್ಥ, ವಿಜ್ಞಾನೇಶ್ವರರಂಥಹ ಮಹಾಮಹಿಮರ ಕರ್ಮಭೂಮಿ ಹೈದ್ರಾಬಾದ ಕರ್ನಾಟಕ ಆದಾಗ್ಯೂ ಇಂದಿನ ಪರಿಸ್ಥಿತಿ ಹೇಗಿದೆ? ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಪಡೆದಿದೆ. ಡಿ.ಎಂ.ನಂಜುಂಡಪ್ಪ ನವರ ವರದಿಯ ಪ್ರಕಾರ ಬೆಳವಣಿಗೆಯ ಅಥವಾ ಅಭಿವೃದ್ಧಿಯ 26 ಅಂಶಗಳಲ್ಲಿ 22ಅಂಶಗಳಲ್ಲಿ ಈ ಪ್ರದೇಶ ನಿರೀಕ್ಷಿತ ಮಟ್ಟವನ್ನು ಮುಟ್ಟಲಿಲ್ಲ.
ಕಾಲದ ಓಟ
ಇದಕ್ಕೇನು ಕಾರಣ? ಚರಿತ್ರೆಯನ್ನು ಅವಲೋಕಿಸಿದಾಗ ಜನತೆಯಲ್ಲಿ ಸೃಜನಶೀಲತೆಯನ್ನು ಬಡಿದೆಬ್ಬಿಸುವ ನಾಯಕವರ್ಗ ಇಲ್ಲಿ ಮೂಡಿಬರಲಿಲ್ಲವೆಂಬುದು ಸತ್ಯ. ಇದನ್ನು ಹೋಗಲಾಡಿಸುವ ಬಗೆ ಹೇಗೆ? ಮತ್ತೆ ನಾವು ಚರಿತ್ರೆಯ ಕಡೆಗೆ ದೃಷ್ಟಿ ನೆಟ್ಟರೆ ನಮಗೆ ಸಿಗುವ ಜ್ವಲಂತ ಉದಾಹರಣೆ ಇಸ್ರೇಲ್ ದೇಶದ್ದು, ಸುಮಾರು 2000 ವರ್ಷಗಳ ಹಿಂದೆಯೇ ಹರಿದು ಹಂಚಿ ಹೋಗಿದ್ದ ‘ಜ್ಯೂ’ ಜನಾಂಗ ಜಗತ್ತಿನ ನಾನಾ ಭಾಗಗಳಲ್ಲಿ ಅನಾಥರಾಗಿ ಜೀವನ ನಡೆಸುತ್ತಿದ್ದರು. ಆದಾಗ್ಯೂ ಅವರು ತಮ್ಮ ತಾಲ್ನಾಡನ್ನು ಒಂದಲ್ಲ ಒಂದು ದಿನ ಪಡೆಯಬೇಕು: ಅಲ್ಲಿ ತಾವು ತಲೆಯೆತ್ತಿ ಬದುಕಬೇಕು ಎಂಬ ಭಾವನೆಯನ್ನು ಜತನದಿಂದ ಕಾಪಾಡಿಕೊಂಡು ಬಂದರು. ತಮ್ಮ ಮಾತೃಭಾಷೆ ಹಿಬ್ರೂವಿನಲ್ಲಿಯೇ ವ್ಯವಹಾರ ಮಾಡಿಕೊಂಡು ಬಂದರು. ಜಗತ್ತಿನ ರಾಜಕೀಯ ಪಲ್ಲಟಗಳನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ಸರಿಯಾಗಿ ಸ್ಪಂದಿಸಿದರು.
ವಿಜ್ಞಾನ, ಯುದ್ಧ ಕೌಶಲಗಳಲ್ಲಿನ ತಮ್ಮ ಪರಿಣತಿಯನ್ನು ಉಚ್ಚಮಟ್ಟದಲ್ಲಿ ಬೆಳೆಸಿಕೊಂಡರು. 1952ರಲ್ಲಿ ತಮ್ಮದೇ ಸ್ವತಂತ್ರ್ಯ ಸಾರ್ವಭೌಮ ರಾಷ್ಟ್ರವನ್ನು ಪಡೆದರು. ಇದಕ್ಕಾಗಿ ಅಪಾರ ಬಲಿದಾನ ಮಾಡಬೇಕಾಯಿತು. ಆದರೂ ಛಲ ಬಿಡಲಿಲ್ಲ. ಅಂತಿಮವಾಗಿ ವಿಜಯ ಪ್ರಾಪ್ತವಾಯಿತು. ಇಂದು ನಮ್ಮ ದೇಶಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಪೂರೈಸುತ್ತಿದೆ. ಅತ್ಯಂತ ಕಡಿಮೆ ಮಳೆ ಬಿಳುವ ಈ ಪ್ರದೇಶ ಕೃಷಿಯಲ್ಲಿ ಅಭೂತಪೂರ್ವ ಸಾಧನೆಗೈದಿದೆ.
Man can always do what men have done ಎಂಬ ವಾಕ್ಯದಂತೆ ಇಸ್ರೇಲಿಗಳಿಗೆ ಸಾಧ್ಯವಾದದ್ದು ಹೈದ್ರಾಬಾದ ಕರ್ನಾಟಕಕ್ಕೆ ಸಾಧ್ಯವಿಲ್ಲವೇ? ಸಾಧ್ಯ. ಇದಕ್ಕಾಗಿ ಅನುಸರಿಸಬೇಕಾದ ಮಾರ್ಗಗಳೇನು? ಎಂಬುದನ್ನು ಅವಲೋಕಿಸಿದಾಗ ಕಂಡುಬರುವ ಜ್ವಲಂತ ಸತ್ಯ. ಶಿಕ್ಷಣದ ಪ್ರಚಾರ, ಪ್ರಸಾರ. ಇದನ್ನು ಗಮನದಲ್ಲಿಟ್ಟುಕೊಂಡು ಸಂಸ್ಕಾರಯುತ ಶಿಕ್ಷಣ ನೀಡಲು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಮ್ ನಗರದಲ್ಲಿ 1974ರ ವಸಂತ ಪಂಚಮಿ ಪಾವನ ದಿನದಂದು ಶ್ರೀಕಾರ ಹಾಕಿತು. ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮೀಜಿಯವರ ಆಶೀರ್ವಾದ. ದೈವೀಬಲದೊಂದಿಗೆ 9 ಮಕ್ಕಳಿಂದ ಶಿಶುವಿಹಾರ ಪ್ರಾರಂಭಗೊಂಡಿತು. ನೋಡು ನೋಡುತ್ತಿದ್ದಂತೆ ಸಮಿತಿಯ ಆಶ್ರಯದಲ್ಲಿ ಶಿಶುವಿಹಾರ, ಪ್ರಾಥಮಿಕ ಶಾಲೆ, ಹೈಸ್ಕೂಲ್, ಜ್ಯೂನಿಯರ ಕಾಲೇಜು, ಪ್ರಥಮ ದರ್ಜೆ ಕಾಲೇಜು. ಬಾಲಕಿಯರ ಕಾಲೇಜು, ಸಿ.ಬಿ.ಎಸ್.ಸಿ. ಶಾಲೆ, ಡಿ.ಎಡ್. ಕಾಲೇಜು, ಕಾನೂನು ಮಹಾವಿದ್ಯಾಲಯ, ವಿದ್ಯಾರ್ಥಿ ನಿಲಯಗಳು ಟಿಸಿಲೊಡೆದವು.
ಅನ್ಯಾನ್ಯ ಕ್ಷೇತ್ರದಲ್ಲಿ ಮೂಡಿದ ಹೆಜ್ಜೆ ಗುರುತು
ಶೈಕ್ಷಣಿಕ ಪ್ರಗತಿಯಾಗುತ್ತಿದಂತೆಯೇ ಬರಿ ಶಾಲಾ ಕಾಲೇಜುಗಳಿಂದ ಇನ್ನುಳಿದ ಜನರಿಗೆ ಸಂಪರ್ಕ ಆಗುವುದಿಲ್ಲ ಎಂಬುದು ಮನಗಂಡು ಯುವಕರಿಗಾಗಿ ಹನುಮಾನ ವ್ಯಾಯಾಮಶಾಲೆ, ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರ ಜೊತೆಗೆ ಉತ್ತಮ ಸಂಸ್ಕಾರದ ಹಿನ್ನೆಲೆಯಲ್ಲಿ ಸಂಗೀತ ಶಾಲೆ ಹಾಗೂ ಪೂಜ್ಯ ಮಡಿವಾಳಯ್ಯ ಸ್ವಾಮಿಗಳ ಹೆಸರಿನಲ್ಲಿ ಉಚಿತ ವೈದ್ಯಕೀಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ಪ್ರಾರಂಭವಾಗಿ ಟೈಪರೈಟಿಂಗ್ ಶಾಲೆ, ಕಂಪ್ಯೂಟರ ತರಬೇತಿ ಕೇಂದ್ರ, ಗೋಶಾಲೆಗಳಂತಹ ಜನೋಪಯೋಗಿ ಪ್ರಕಲ್ಪಗಳು ಅನಾವರಣಗೊಂಡವು. ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕೆಂಬ ತುಡಿತದಿಂದ ಶಾಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಶಿಕ್ಷಕರ ಶಿಬಿರ, ಕನ್ನಡ ಸಾಹಿತ್ಯ ಪರಿಷತ್, ವಿಜ್ಞಾನ ಪರಿಷತ್ತುಗಳ ಸಯೋಗದೊಂದಿಗೆ ಸಾಹಿತ್ಯಕ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಪ್ರೇರಣೆ ನೀಡಲಾಯಿತು. ಮುಂದೆ ರಾಜ್ಯ ಮಟ್ಟದ ಶಿಶು ಸಂಗಮ ವಿಜೃಂಭಣೆಯಿಂದ ಸಂಪನ್ನಗೊಂಡಿತು. ನಿಧಾನವಾಗಿ ಸಂಸ್ಥೆಯು ಗ್ರಾಮೀಣ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಸೇಡಮ್ ತಾಲೂಕಿನ ಕೋಲ್ಕುಂದಾ, ಮುಧೋಳ ಹಾಗೂ ಪಕ್ಕದ ತಾಲೂಕಾ ಕೇಂದ್ರವಾದ ಚಿಂಚೋಳಿಯಲ್ಲಿ ಶೈಕ್ಷಣಿಕ ಪ್ರಕಲ್ಪಗಳು ಪ್ರಾರಂಭಿಸಿ ಬೆಳ್ಳಿಹಬ್ಬ ಕಾರ್ಯಕ್ರಮದ ಮೂಲಕ ಜಿಲ್ಲೆ ಮತ್ತು ವಿಭಾಗದ ವರೆಗೆ ಸಂಸ್ಥೆಯ ಕಾರ್ಯಚಟುವಟಿಕೆಗಳು ನಡೆದವು.
ಹರಿದು ಬಂದ ಸಹಾಯ ಧನ
ಕೇವಲ ಶಿಕ್ಷಣ ಕ್ಷೇತ್ರದ ಕಾರ್ಯವೊಂದರಿಂದಲೇ ನಾಡೊಂದು ಪ್ರಗತಿ ಪಥದಲ್ಲಿ ಮುನ್ನಡೆಯಲಾರದು. ಬೆಳ್ಳಿಹಬ್ಬದ ಕಾರ್ಯಕ್ರಮ ಶೈಕ್ಷಣಿಕ ಜಾತ್ರೆ ಎಂಬ ಶೀರ್ಷಿಕೆ ಆಡಿಯಲ್ಲಿ ಆಯೋಜಿಸಿ ನಾಡಿನ ದೇಶದ ವಿವಿಧ ಸ್ಥರಗಳಲ್ಲಿ ಕಾರ್ಯನಿರ್ವಹಿಸಿದ ಅನೇಕ ಹಿರಿಯನ್ನು ಆಮಂತ್ರಿಸಿ, ಇಡೀ ಜಿಲ್ಲೆ ಹಾಗೂ ವಿಭಾಗಕ್ಕೆ ಒಂದು ಹೊಸ ದಿಸೆ ನೀಡಲು ಪ್ರಯತ್ನಿಸಲಾಯಿತು. ಈ ಕಾರ್ಯಕ್ರಮಕ್ಕೆ ಜನರಿಂದ ವಿವಿಧ ಸಂಘಟನೆಗಳಿಂದ ಅಭೂತಪೂರ್ವ ಸಹಕಾರ ಲಭ್ಯವಾಯಿತು. ಇದರ ಫಲವೇ ಈ ಭಾಗದ ಹಿಂದುಳಿವಿಕೆಯ ಹಣೆಪಟ್ಟಿ ಹೋಗಲಾಡಿಸಲು ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ವಿಭಾಗವೆಂಬ ಪ್ರಕಲ್ಪ ಸ್ಥಾಪಿಸಿ 26 ವಿಭಾಗಳಲ್ಲಿ ಕಾರ್ಯ ಯೋಜನೆ ಮಾಡಿ, 7 ಜಿಲ್ಲೆಗಳ ಹಾಗೂ 48 ತಾಲೂಕುಗಳಲ್ಲಿ ಸಂಚಾಲಕರ ಮೂಲಕ ಅನೇಕ ಕಾರ್ಯಕ್ರಮಗಳು ಆಯೋಜನೆ ಮಾಡಿ ಜನರಿಗೆ ಜಾಗೃತಿ ಮೂಡಿಸಲಾಯಿತು. ಈ ಕಾರ್ಯ ನಿರ್ವಹಿಸಲು ಅನೇಕ ಜನರಿಂದ, ಸಂಘ ಸಂಸ್ಥೆಗಳಿಂದ ಸಿಕ್ಕ ಸಹಕಾರ ಅಪಾರ. ಇದರ ಒಂದು ಸ್ವರೂಪ ಈ ಭಾಗದ ಜನರಿಗೆ ಪ್ರತ್ಯಕ್ಷ ತೋರಿಸಲು ಮಾಡಿದ ಪ್ರಯತ್ನವೇ “ಜಾಗೃತಿ ಜಾತ್ರೆ”.”
ಮೂಡಿದರಿಂದ ಒಟ್ಟು ಸಮಾಜದ ಬೆಳವಣಿಗೆಗಾಗಿ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಗಮನಿಸಿದ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಬಳಗ, ಪ್ರತೀಕ್ಷಾ ಟ್ರಸ್ಟ್ ಹಾಗೂ ದಾನಿಗಳ ಕೊಡುಗೈ ದಾನದಿಂದಾಗಿ ಈ ಭಾಗದ ಬಡ, ನಿರ್ಗತಿಕ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ವಿದ್ಯಾರ್ಥಿ ಸಹಾಯ ಧನ, ಕ್ಯಾಲೆಂಡರ್, ಡೈರಿ, ಪುಸ್ತಕ ಪ್ರಕಾಶನ, ರೇಡಿಯೋ ಪ್ರಸಾರ ಮುಂತಾದ ಕ್ಷೇತ್ರಗಳಲ್ಲಿ ಸಮಿತಿ ಕಾರ್ಯನಿರ್ವಹಿಸಿ ಈ ಭಾಗದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ನಾಂದಿ ಹಾಡಿತು. ಇದರ ವಿರಾಟ ದರ್ಶನಕ್ಕಾಗಿ 2006-2007ರಲ್ಲಿ “ಜಾಗೃತಿ ಜಾತ್ರೆ” ಹಾಗೂ 2010-11ರಲ್ಲಿ ಜರುಗಿದ “ಕಲಬುರ್ಗಿ ಕಂಪು” ಕಾರ್ಯಕ್ರಮ ನಾಡಿನ, ದೇಶದ ಸಾಂಸ್ಕೃತಿಕ ಇಹಾಸದಲ್ಲಿ ಒಂದು ಮೈಲಿಗಲ್ಲಾಯಿತು. ಬಳಿಕ ಸಮಿತಿಗೆ ಇನ್ನೂ ಹೆಚ್ಚಿನ ನಂಬಿಕೆ
ಮುಂದೆ ಸಮಿತಿಯು ಚಿಂತನೆ ಮಾಡಿ ಅಭಿವೃದ್ಧಿ ಎಂಬುದು ಸೀಮಿತವಾಗಿರುವುದಿಲ್ಲ ಅದು ಮುಂದುವರಿಸಿಕೊಂಡು ಹೋಗಬೇಕೆಂಬ ಹಂಬಲದಿಂದ “ವಿಕಾಸ ಅಕಾಡೆಮಿ” ಎಂಬ ಟ್ರಸ್ಟ್ ಪ್ರಾರಂಭಿಸಲಾಯಿತು. ಇದಕ್ಕೆ ಇನ್ನಷ್ಟು ಮಾರ್ಗದರ್ಶನ ದೇಶದ ಶ್ರೇಷ್ಠ ಚಿಂತಕರಾದ ಶ್ರೀ ಕೆ. ಎನ್. ಗೋವಿಂದಾಚಾರ್ಯರ “ಭಾರತ ವಿಕಾಸ ಸಂಗಮ”ದ ಮೂಲಕ ಲಭ್ಯವಾಯಿತು. ಇದರಿಂದ ಸಂಸ್ಥೆಯ
ಕಾರ್ಯ ಕ್ಷೇತ್ರ ದೇಶದ ಐದು ಜಿಲ್ಲೆಗಳಲ್ಲಿ ಪಸರಿಸಿತು. ವಿಕಾಸ ಅಕಾಡೆಮಿಯ ಆಶ್ರಯದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಮಹಿಳಾ ಸಬಲೀಕರಣ, ಯುವ ಮುಂತಾದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರ ಫಲವಾಗಿ ಗೋ ಸಂವರ್ಧನ, ಬುದ್ಧಿಮಾಂದ್ಯ ಹಾಗೂ ವಿಕಲಾಂಗ ಮಕ್ಕಳ ಯೋಗಕ್ಷೇಮ, ಚಿತ್ರ ಸಂತೆ, ಸಂಗೀತ, ಸಾಹಿತ್ಯ ಪ್ರಕಟಣೆ, ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತಿರುವವರ ಸಂಪರ್ಕ ಸಾಧಿಸಿ ಅವುಗಳ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ.
ಸಮಯ ಬದ್ಧ – ಚರಣ ಬದ್ಧ ಯೋಜನೆ
ಯಾವುದೇ ಒಂದು ಕಾರ್ಯ ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಬೇಕಾಗಿದರೆ ಅದು ಸಮಯ ಬದ್ಧ ರೀತಿಯಲ್ಲಿ ಕಾರ್ಯವೆಸಗಬೇಕಾಗುತ್ತದೆ. ಸಮಿತಿಯ ಸ್ವರ್ಣ ಜಯಂತಿ 2024-25ರಲ್ಲಿ ಸಂಪನ್ನಗೊಳ್ಳಲಿದೆ. 8 ವರುಷಗಳಷ್ಟು ದೂರದಲ್ಲಿದೆ. ಈ ಅವಧಿಯಲ್ಲಿ ಮಾಡುವ ಕಾರ್ಯಕ್ಕೆ ದಶವಾರ್ಷಿಕ ಯೋಜನೆಯೊಂದನ್ನು ರೂಪಿಸಿ ಆ ದಿಶೆಯಲ್ಲಿ ನಮ್ಮ ಆಧಾರಭೂತ ನಂಬಿಕೆಗಳಾದ “ನನ್ನ ಜಿಲ್ಲೆ-ನನ್ನ ಜಗತ್ತು, ನನ್ನ ಗ್ರಾಮ ನನ್ನ ದೇಶ” ಜಲ, ಜಂಗಲ, ಜಮೀನ್, ಜೀವಜಂತುಗಳ ಪಾಲನೆ, ಪೋಷಣೆ. ಪ್ರಕೃತಿ ಮಾತೆ, ಗೋ ಮಾತೆ, ಮನೆಯ ಶ್ರೀಮಾತೆ ಈ ತ್ರಿಕೋನಕ್ಕೆ ಒಂದು ಹೊಸ ರೂಪ ನೀಡಿ ಮನೆಯೇ ಮೊದಲ ಪಾಠಶಾಲೆಯಾಗಿ ಮಗುವಿಗೆ ಉತ್ತಮ ಸಂಸ್ಕಾರ ನೀಡುವ ವಾತಾವರಣ ನಿರ್ಮಾಣ ಮಾಡುವದರಿಂದ ಪ್ರಾರಂಭವಾಗಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣದ ಸಮಯದಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಪಾಲಕರಿಗೆ ಮಾತೆಯರಿಗೆ ಸಭೆ ಕರೆದು ಮನೆಯ ವಾತಾವರಣ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ, ಆಟ-ಪಾಠದ ಜೊತೆಗೆ ಕಾಯಕ ಸಂಸ್ಕೃತಿ ಬೆಳೆಸಲು ಮಕ್ಕಳಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ಭಾಗವಹಿಸುವದರ ಮೂಲಕ ಅವರಿಗೆ ಜೀವನ ತರಬೇತಿ ನೀಡುವಂತಹ ಕಾರ್ಯಕ್ರಮಗಳು ಶಾಲೆ ಕಾಲೇಜಗಳಲ್ಲಿ ಆಯೋಜನೆ ಮಾಡಿ ಮಕ್ಕಳು, ಮನೆ, ಸಮಾಜ ತನ್ಮೂಲಕ ರಾಷ್ಟ್ರದ ಸತ್ಪಜೆಗಳಾಗಿ ಹೊರ ಹೊಮ್ಮಬೇಕೆಂಬುದು ನಮ್ಮ ಅಪೇಕ್ಷೆ.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮೈಲಿಗಲ್ಲುಗಳು
1) ಕ್ರೀಡಾ ಕೂಟ -1981
2) ಸೇಡಮ್ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ – 1981
3) ರಾಜ್ಯಮಟ್ಟದ ಬಾಲ ಸಂಗಮ – 1985
4) ವಿಜ್ಞಾನ ಮೇಳ – 1995
5) ಬೆಳ್ಳಿಹಬ್ಬ – 1999
6) ರಾಜ್ಯಮಟ್ಟದ ಇತಿಹಾಸ ಸಮ್ಮೇಳನ – 2005
7) ಹೈದ್ರಾಬಾದ ಕರ್ನಾಟಕ ಜಾಗೃತಿ ಜಾತ್ರೆ – 2007
8) ಕಲಬುರಗಿ ಕಂಪು (ಭಾರತ ವಿಕಾಸ ಸಂಗಮ-3) – 2011
ಸಮಿತಿಯ ಎಲ್ಲ ಚಟುವಟಿಕೆಗಳು ಜನತೆಯ ಉದಾರ ದಾನದಿಂದ ನಡೆದುಕೊಂಡು ಬಂದಿದೆ ಆದಾಗ್ಯೂ ಸರ್ಕಾರದೊಂದಿಗೆ ಸಂಘರ್ಷವಿಲ್ಲ. ದೈನ್ಯತೆಯಿಂದ ಬೇಡುವ ಪ್ರವೃತ್ತಿ ಸಮಿತಿಯದ್ದಲ್ಲ. ಈ ಭಾವನೆಯನ್ನು ಜನತೆಯಲ್ಲಿ ಬಿಂಬಿಸಲು ಸದಾ ಕಾರ್ಯಶೀಲವಾಗಿದೆ. ಯಾವುದೇ ಒಂದು ಜನಾಂಗ ಕೃಪೆ, ದಾನ, ಭಿಕ್ಷೆ, ಸಬ್ಸಿಡಿಯಿಂದ ಮೇಲ್ಮಟ್ಟ ಮುಟ್ಟಿದ ಒಂದೇ ಒಂದು ಉದಾಹರಣೆ ಚರಿತ್ರೆಯಲ್ಲಿ ಸಿಗುವುದಿಲ್ಲ. ಇದನ್ನು ಜನತೆ ಅರ್ಥಮಾಡಿಕೊಂಡು ಎಲ್ಲದಕ್ಕೂ ಮೂಲ ಕಠಿಣ ಪರಿಶ್ರಮ ಪಟ್ಟಾಗ ಮಾತ್ರ ಸಮಾಜ ಏಳಿಗೆಯನ್ನು ಸಾಧಿಸಲು ಸಾಧ್ಯ.
ವೀರ ಹನುಮಾನನು ಜನಸಿದ ನಾಡು. ಸರ್ದಾರ ವಲ್ಲಭಭಾಯಿ ಪಟೇಲ್ರ ಚಾಕಚಕ್ಯತೆಯಿಂದ ರೂಪುಗೊಂಡ ಈ ಪ್ರದೇಶ ತನ್ನ ಗತವೈಭವದ ದಿನವನ್ನು ಶೀಘ್ರಾತಿ ಶೀಘ್ರ ಕಾಣುವಂತಾಗಲಿ ಎಂಬುದು ನಮ್ಮ ಹೃದಯದಾಳದ ಬಯಕೆ. ಅಕ್ಷಯ ವಿಕಾಸದ ಕಡೆಗಿನ ನಮ್ಮ ಪಯಣ ಜನತಾ ಜನಾರ್ಧನನ ನೆರವಿನೊಂದಿಗೆ ನಿರಂತರ ಚಲನಶೀಲವಾಗಿರಲಿ ಸಮಾಜ ಪುರುಷನ ಈ ಚೇತೋಹಾರಿ ಕಾರ್ಯಕ್ಕೆ ತಾವು ತನು, ಮನ, ಧನದೊಂದಿಗೆ ಸಹಾಯ ಹಸ್ತ ಚಾಚಬೇಕೆಂದು ಕೋರುವೆವು. ಚೆಕ್ ಮತ್ತು ಡ್ರಾಪ್ಟಗಳನ್ನು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಮ್ ಹೆಸರಿಗೆ ಬರೆಯಿರಿ. ಸಮಿತಿಯು 80ಜಿ ಸೌಲಭ್ಯ ಹೊಂದಿದ್ದು, ನಂ: F No: 55/80G/CIT.Glb end. ಸದುಪಯೋಗ ಮಾಡಿಕೊಳ್ಳಬಹುದು.