ವಿವೇಕಪೂರ್ಣ ಚಿಂತನೆ ಮತ್ತು ಜವಾಬ್ದಾರಿತ್ವದಿಂದ ಹೊಸ ಬದಲಾವಣೆ ಸಾಧ್ಯವಾಗುತ್ತದೆ- ಎ. ಹೆಚ್. ಸಾಗರ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ದಿನಾಂಕ 27.05.2025 ರಂದು ಸ್ಥಳೀಯ ತಾಪಡಿಯಾ ಭವನದಲ್ಲಿ ಆಯೋಜಿತ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿದ ಅಂತರಾಷ್ಟ್ರೀಯ ಖ್ಯಾತ ಮನೋ ಶಿಕ್ಷಣ ತಜ್ಞರಾದ ಎ ಹೆಚ್. ಸಾಗರ ಅವರು ಸರ್ವ ಶಿಕ್ಷಕ ಬಳಗದವರನ್ನುದ್ದೇಶಿಸಿ ಮಾತನಾಡುತ್ತ , ವಿವೇಕ ಪೂರ್ಣ ಚಿಂತನೆ ಮತ್ತು ಜವಾಬ್ದಾರಿತ್ವದಿಂದ ಮಾತ್ರ ಹೊಸ ಬದಲಾವಣೆ ಸಾಧ್ಯ ಎಂದರು.
ಒಂದು ದಿನದ ಕಾರ್ಯಾಗಾರದಲ್ಲಿ
ದೃಷ್ಟಿಕೋನ, ಮೌಲ್ಯಮಾಪನ, ನಿರೀಕ್ಷೆ, ವಿಶ್ಲೇಷಣೆ ಮತ್ತು ಅನ್ವಯದಿಂದ ಮಾತ್ರ ಕೌಶಲ್ಯ ಹೆಚ್ಚಿಸಿಕೊಳ್ಳಬಹುದೆಂದರು.
ಕಾರ್ಯಗಾರದ ವಿವಿಧ ಅವಧಿಗಳಲ್ಲಿ ಅವರು ಭಾಗವಹಿಸಿ ಮಾರ್ಗದರ್ಶನಗೈಯುತ್ತಾ ಉತ್ತಮ ಆಲೋಚನೆಗಳು ಎಂದಿಗೂ ಆಕಾಶದಿಂದ ಉದುರುವುದಿಲ್ಲ. ನಿರಂತರ ಜ್ಞಾನ ಸಂಪಾದನೆಯಿಂದ ಧನಾತ್ಮಕ ಆಲೋಚನೆಗಳೊಂದಿಗೆ ನಾವು ಪ್ರಯತ್ನಪಟ್ಟಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬಹುದೆಂದರು.
ಶಿಕ್ಷಣ ಸಮಿತಿಯ ಸಂರಕ್ಷಕರಾದ ಬಸವರಾಜ ಪಾಟೀಲ ಸೇಡಮ್ ಅವರು ಪ್ರಾಸ್ತಾವಿಕ ಮಾತುಗಳಲ್ಲಿ, ಶಿಕ್ಷಣ ಸಮಿತಿಯ ಮೂಲ ಉದ್ದೇಶಗಳನ್ನು ತಿಳಿಸುತ್ತಾ, ನಮ್ಮ ಮಕ್ಕಳು ದಾರಿದ್ರ್ಯದ ವಿಚಾರದಿಂದ ಹೊರಗಡೆ ಬಾರದಿದ್ದರೆ ನಮ್ಮ ಪ್ರಯತ್ನ ವ್ಯರ್ಥ ಎಂದರು.
ನಮ್ಮ ಶಿಕ್ಷಣವು ಉನ್ನತ ವಿಚಾರವುಳ್ಳ ಮನೋಸ್ಥೈರ್ಯವನ್ನು ಹೊಂದಿರುವ ಮಕ್ಕಳನ್ನು ಸೃಷ್ಟಿ ಮಾಡಬೇಕೆನ್ನುತ್ತಾ,ಈ ಪುನಶ್ಚೇತನ ಶಿಬಿರವು ಶಿಕ್ಷಕರಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸದ ಇತಿಹಾಸ ಬರೆಯಲಿ ಎಂದರು.
ಉದ್ಘಾಟನಾ ಸಮಾರಂಭದ ವೇದಿಕೆ ಮೇಲೆ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಮತಿ ಅನುರಾಧ ಪಾಟೀಲ್ ಉಪಸ್ಥಿತರಿದ್ದರು.
ಶಿಕ್ಷಣ ಸಮಿತಿ ಸಂಚಾಲಿತ ವಿವಿಧ ಪ್ರಕಲ್ಪಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 250 ಕ್ಕಿಂತ ಹೆಚ್ಚು ಶಿಕ್ಷಕ ಬಳಗ ಕಾರ್ಯಗಾರದಲ್ಲಿ ಭಾಗವಹಿಸಿ ಶೈಕ್ಷಣಿಕ ಮನೋತಜ್ಞರ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳಿಗೆ ಉತ್ತರ ಕಂಡುಕೊಂಡರು.
ಶ್ರೀ ಮನ್ಸೂರ್ ಅವಟಿ ಸ್ವಾಗತಿಸಿದರೆ, ಶ್ರೀಮತಿ ಆರತಿ ಕಡಗಂಚಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿಗಳಾದ ಡಾ ಸದಾನಂದ ಬೂದಿ, ಸದಸ್ಯರಾದ ರಮೇಶ್ ತಾಪಡಿಯಾ, ನರೇಂದ್ರ ರುದ್ನೂರ್, ಕೆರಳ್ಳಿ ಗುರುನಾಥ್ ರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷರಾದ ಸಿದ್ದಪ್ಪ ತಳ್ಳಳ್ಳಿ, ನಿವೃತ್ತ ಪ್ರಾಚಾರ್ಯರಾದ ಹಾಸರೆಡ್ಡಿ ಮನ್ನೆ, ವಿದ್ಯಾ ಭಾರತೀ ಪ್ರಮುಖರಾದ ಪಿ ಭೀಮರೆಡ್ಡಿ, ನಿವೃತ್ತ ಪ್ರಾಚಾರ್ಯ ರಾಮಚಂದ್ರ ಜೋಶಿ, ಆಡಳಿತಾಧಿಕಾರಿ ಚನ್ನಬಸಪ್ಪ ಗವಿ, ಶಿಕ್ಷಣ ಸಂಯೋಜಕರಾದ ಸತ್ಯ ಕುಮಾರ್ ಬಾಗೋಡಿ, ಮೈಪಾಲರೆಡ್ಡಿ ಪಾಟೀಲ ಮತ್ತು ಸಜ್ಜನ್ ಶೇಖಪ್ಪ ಉಪಸ್ಥಿತರಿದ್ದರು.






